ಎಲೆಕ್ಟ್ರೊಫಾರಿಸಿಸ್: ವಿದ್ಯುತ್ಪ್ರವಾಹವನ್ನು ತರಲದಲ್ಲಿ (ಪ್ಲುಯಿಡ್) ಹರಿಸುವುದರ ಮೂಲಕ ಅದರಲ್ಲಿರುವ ಕಲಿಲ ಕಣಗಳ (ಕಲಾಯಿಡಲ್ ಪಾರ್ಟಿಕಲ್ಸ್‌) ಸಾಗಣೆ (ವಿದ್ಯುತ್ಕ್ಷೇತ್ರ ಚಲನೆ). ಇದೊಂದು ವಿದ್ಯುದ್ರಾಸಾಯನಿಕ ಕ್ರಿಯೆ. ಆವೆ ಮಣ್ಣು (ಕೊಚ್ಚೆಮಣ್ಣು-ಕ್ಲೇ) ನೀರಲ್ಲಿ ಹರಡಿ  ನಿಂತಿರುವಾಗ ಅದರಲ್ಲಿ ವಿದ್ಯುತ್ತನ್ನು ಹರಿಸಿದರೆ ಮಣ್ಣಿನ ಕಣಗಳು ಧನಧ್ರುವಕ್ಕೆ (ಪಾಸಿಟಿವ್ ಎಲೆಕ್ಟ್ರೋಡ್) ಸಾಗುವುದನ್ನು ರೂಯಸ್ ಕಂಡುಹಿಡಿದ (1807). ಈ ಕ್ರಿಯೆಯನ್ನು ಎಲೆಕ್ಟ್ರೊಫಾರಿಸಿಸ್ ಎಂದು ಕರೆಯಲಾಯಿತು. ಋಣ ವಿದ್ಯುದಂಶವಿರುವ ಕಣಗಳು ಧನಧ್ರುವದೆಡೆಗೂ ಧನ ವಿದ್ಯುದಂಶವಿರುವ ಕಣಗಳು ಋಣ ಧ್ರುವದೆಡೆಗೂ ಚಲಿಸುವುದನ್ನು ಹಲವು ದಶಕಗಳ ತರುವಾಯ ಕಂಡುಹಿಡಿಯ ಲಾಯಿತು. ಈ ಕ್ರಿಯೆಗಳನ್ನು ಕ್ರಮವಾಗಿ ಅನಾಫಾರಿಸಿಸ್ ಮತ್ತು ಕ್ಯಾಟಾಫಾರಿಸಿಸ್ ಎಂದು ಕರೆದರು. ಚಲನೆಯ ವೇಗ ಕಣಗಳ ಆಕಾರ ಮತ್ತು ಅಳತೆಯನ್ನು ಅವಲಂಬಿಸಿ ರುವುದು ಮಾತ್ರವಲ್ಲದೆ ಅವುಗಳ ಮೇಲಿರುವ ವಿದ್ಯುದಂಶದ (ಎಲೆಕ್ಟ್ರಿಕ್ ಚಾರ್ಜ್) ಪ್ರಮಾಣವನ್ನು ಕೂಡ ಅವಲಂಬಿಸಿದೆ. ಈ ವಿಚಾರ ತಿಳಿದ ಮೇಲೆ ಒಂದು ಮಿಶ್ರಣದಲ್ಲಿ ರುವ ಬೇರ ಬೇರೆ ವಸ್ತುಗಳನ್ನು ಬೇರ್ಪಡಿಸಲು ಸಾಧ್ಯವೆಂದು ಕಂಡುಹಿಡಿಯಲಾಯಿತು. ಕಣಗಳ ಮೇಲಿರುವ ವಿದ್ಯುದಂಶ ಅವುಗಳ ಸ್ವಾಭಾವಿಕ ಗುಣದಿಂದ ಬರಬಹುದು; ಅಥವಾ ನೀರಲ್ಲಿರುವ ಅಯಾನುಗಳು ಕಣಗಳ ಮೇಲೆ ಸೇರುವುದರಿಂದಲೂ ಬರಬಹುದು.
ನೀರಲ್ಲಿ ಹರಡಿರುವ ಕಣಗಳು ಧ್ರುವಗಳೆಡೆಗೆ ಸಾಗುವ ವೇಗವನ್ನು ಕಂಡು ಹಿಡಿಯಲು ಮೂರು ವಿಧಾನಗಳಿವೆ. ಒಂದನೆಯದಾಗಿ, ಸೂಕ್ಷ್ಮ ದರ್ಶಕದ ಮುಖಾಂತರ ನೋಡುವ ಕ್ರಮ. ಇದರಿಂದ ರಕ್ತಕಣಗಳು, ಬ್ಯಾಕ್ಟಿರಿಯ ಮತ್ತು ಕೆಲವು ಪ್ರೋಟೀನ್ ಅಣುಗಳು ಇತರ ಪದಾರ್ಥಗಳ ಮೇಲೆ ಸೇರಿ ಚಲಿಸುವುದನ್ನು ನೋಡಬಹುದು. ಎರಡನೆಯದಾಗಿ, ಕಣಗಳ ರಾಶಿಗಳು ಚಲಿಸುವಾಗ ಅವುಗಳ ಮೇರೆಯನ್ನು ನೋಡಿ ತಿಳಿಯುವ ಕ್ರಮ. ಇದರಲ್ಲಿ ಚಲನೆಯಲ್ಲಿರುವ ಕಣಗಳನ್ನು ನೋಡುವ ಅಗತ್ಯ ಇಲ್ಲ. ನೊಬೆಲ್ ಬಹುಮಾನ ಪಡೆದ ಟಸೆಲಿಯಸ್ ಮತ್ತು ಆತನ ಸಹವರ್ತಿಗಳು ಈ ಕ್ರಮವನ್ನು ಪ್ರಯೋಗಿಸಿ ಹಲವು ವಿಧವಾದ ಇತರ ಸಂಶೋಧನೆಗಳನ್ನು ನಡೆಸಿರುವರು. ಮೂರನೆಯದಾಗಿ, ವಸ್ತುಗಳ ಕಣಗಳು ಮತ್ತು ಅಯಾನುಗಳು ಸ್ವಾಭಾವಿಕವಾಗಿ ಕಾಗದಗಳ ಮತ್ತು ಪಿಷ್ಟ ಪದಾರ್ಥಗಳ ಮೇಲೆ ಬೇರ್ಪಡಿಸಲ್ಪಡುವ ವಿಧಾನವನ್ನು ಉಪಯೋಗಿಸುವ ಕ್ರಮ. ಈ ಕ್ರಮದಲ್ಲಿ ವಿದ್ಯುತ್ಪ್ರವಾಹದ ಅಗತ್ಯ ಇಲ್ಲ.
ಮನುಷ್ಯನ ದೇಹದಲ್ಲಿರುವ ಪ್ರೋಟೀನುಗಳನ್ನು ಕಂಡುಹಿಡಿಯಲು ಎಲೆಕ್ಟ್ರೊಫಾರಿಸಿಸ್ ಬಹು ಪ್ರಮುಖ ವಿಧಾನ. ಹಲವು ರೋಗಗಳ ಕಾರಣಗಳನ್ನು ಈ ವಿಧಾನದಿಂದ ಕಂಡುಹಿಡಿಯಲು ಸಾಧ್ಯವಿದೆ.

ವಿದ್ಯುದಂಶಪುರಿತ ವಸ್ತುಗಳ ಕಣಗಳನ್ನು ಧ್ರುವಗಳ ಮೇಲೆ ಲೇಪಿಸುವಂತೆ ಮಾಡಲೂ ಸಾಧ್ಯವಿದೆ. ವಿದ್ಯುತ್ಪ್ರವಾಹದಿಂದ ಲೋಹಗಳನ್ನು ಹೇಗೆ ಲೇಪಿಸಲು ಸಾಧ್ಯವೋ ಅದೇ ರೀತಿ ಕಣರೂಪದಲ್ಲಿ ನೀರಿನಲ್ಲಿ ಹರಡಿರುವ ಪದಾರ್ಥಗಳನ್ನು ಲೋಹಗಳ ಮೇಲೆ ಲೇಪಿಸಲು ಸಾಧ್ಯವಿದೆ. ಇದಕ್ಕೆ ಎಲೆಕ್ಟ್ರೋಫಾರೆಟಿಕ್ ಲೇಪನವೆಂದು (ಡಿಪಾಸಿಷನ್) ಹೆಸರು. ಬಲು ತೆಳ್ಳಗಾದ ಲೇಪನವನ್ನು ಈ ವಿಧಾನದಿಂದ ಪಡೆಯುವುದು ಮಾತ್ರವಲ್ಲದೆ ಬೇಕಾದಷ್ಟೇ ದಪ್ಪವನ್ನು ಪಡೆಯಲು ಸಾಧ್ಯವಿದೆ. ರಬ್ಬರ್ ಹಾಲಿನಿಂದ (ರಬ್ಬರ್ ಲೇಟಿಕ್ಸ್‌) ರಬ್ಬರನ್ನು ಬೇರ್ಪಡಿಸಲು ಸಾಧ್ಯವಿದೆಯೆಂದು ತಿಳಿದಿದ್ದರಿಂದ ರಬ್ಬರ್ ಕೈಚೀಲ ತಯಾರಿಸುವ ಕ್ರಮವನ್ನೂ ಕಂಡು ಹಿಡಿಯಲಾಯಿತು. ಇತ್ತೀಚಿನ ದಿನಗಳಲ್ಲಿ ಕಾರಿಗೆ ಬಣ್ಣ ಹಚ್ಚಲು ಎಲೆಕ್ಟ್ರೋಫಾರೆಟಿಕ್ ಕ್ರಮವನ್ನು ಉಪಯೋಗಿಸುತ್ತಾರೆ.

ಎಲೆಕ್ಟ್ರೊಫಾರಿಸಿಸ್ ವಿಧಾನದಿಂದ 1-20 ಮೈಕ್ರಾನ್ (ಒಂದು ಮಿಲಿ ಮೀಟರಿನ ಸಾವಿರದ ಒಂದನೆಯ ಅಂಶ) ಪ್ರಮಾಣದ ಕಣಗಳನ್ನು ನೀರಿನಿಂದ ಬೇರ್ಪಡಿಸಲು ಆಗುತ್ತದೆ. ಪದಾರ್ಥಗಳ ಕಣಗಳನ್ನು ತಯಾರಿಸಲು ಹಲವು ವಿಧಾನಗಳಿವೆ. ಸೋಸಣೆಯಿಂದ (ಸೀವಿಂಗ್)  ಬಂದ ಪದಾರ್ಥಗಳನ್ನು ಗೋಲಿ ಗಿರಣಿಯಲ್ಲಿ (ಬಾಲ್ ಮಿಲ್) ಇನ್ನೂ ಅರೆಯುವುದರಿಂದ ಅವನ್ನು ದ್ರವಪದಾರ್ಥಗಳಲ್ಲಿ ಹರಡಬಹುದು. ನೀರು ಮಾತ್ರವಲ್ಲದೆ ಇತರ ದ್ರವಪದಾರ್ಥಗಳನ್ನೂ ಉಪಯೋಗಿಸಬಹುದು. ಅಸಿಟೋನ್, ಈಥೈಲ್ ಆಲ್ಕೊಹಾಲ್ ಇತ್ಯಾದಿ ದ್ರವಗಳನ್ನು ಉಪಯೋಗಿಸಿ ಅಯಾನುಗಳನ್ನು ಕೊಡುವ ಅಮೋನಿಯಮ್ ಹೈಡ್ರಾಕ್ಸೈಡ್, ಸಿಟ್ರಿಕ್ ಆಮ್ಲ ಇತ್ಯಾದಿಗಳನ್ನು ಸ್ವಲ್ಪಮಟ್ಟಿಗೆ ಸೇರಿಸುವುದರ ಮುಖಾಂತರ ಹರಡಿಕೆ ಯಶಸ್ವಿಯಾಗುತ್ತದೆ. ಇಂಥ ಹರಡಿಕೆಯಿಂದ ಮಾಡತಕ್ಕ ಲೇಪನಗಳು, ಬಹಳ ಗಟ್ಟಿಯಾಗಿ ಒಟ್ಟಿಕೊಂಡಿರುತ್ತವೆ. ಬೇರೆ ಬೇರೆ ಪದಾರ್ಥಗಳನ್ನು ಲೇಪನಮಾಡುವುದು ಮಾತ್ರವಲ್ಲದೆ ಲೋಹಗಳ ತುಣುಕಗಳನ್ನೂ ಕೂಡ ಲೇಪನಮಾಡಲು ಸಾಧ್ಯವಿದೆ. ಹರಡಿಕೊಂಡಿರುವ ಎರಡು ವಸ್ತುಗಳನ್ನು ದ್ರವದಿಂದ ಅದೇ ಪ್ರಮಾಣದಲ್ಲಿ ಲೇಪನಮಾಡಬಹುದು. ನೀರಿನಿಂದ ಪದಾರ್ಥಗಳನ್ನು ಲೇಪಿಸಲು ಸಾಮಾನ್ಯ 15 ವೋಲ್ಟ್‌ಗಳು ಬೇಕಾದರೆ ಇತರ ದ್ರವಗಳಿಂದ ಬೇರ್ಪಡಿಸಲು 100-2500 ವೋಲ್ಟ್‌ಗಳು ಬೇಕಾದೀತು. ಆಲ್ಯೂಮಿನಿಯಂ ಲೋಹದ ತುಣುಕುಗಳನ್ನು ಕಬ್ಬಿಣದ ಮೇಲೆ ಲೇಪಿಸಿ ಅನಂತರ ಬಿಸಿಮಾಡಿ ಅದು ಅಂಟುವಂತೆ ಮಾಡುವ ಕ್ರಮವೂ ಇದೆ. (ಎಸ್.ವಿ.ಕೆ.ಯು.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ